ಪ್ರಾಗ್ಜ್ಯೋತಿಷಪುರ
	ಒಂದು ಪುರಾಣ ಖ್ಯಾತ ಪಟ್ಟಣ. ಕಾಮರೂಪ ಎಂದೂ ಕರೆಯುವುದಿದೆ. ಇದು ಈಗಿನ ಅಸ್ಸಾಂ ರಾಜ್ಯಕ್ಕೆ ಸೇರಿದೆ. ಪಾಂಡವರ ಕಾಲದಲ್ಲಿ ಈ ಪಟ್ಟಣ ನರಕಾಸುರನ ಅನಂತರ ಅವನ ಮಗ ಭಗದತ್ತನ ರಾಜಧಾನಿಯಾಗಿತ್ತು. ಈ ನಗರಕ್ಕೆ ಅಭೇದ್ಯವಾದ ಜಲದುರ್ಗಗಳಿದ್ದುದರಿಂದ ಶ್ರೀಕೃಷ್ಣ ಅಲ್ಲಿಗೆ ಗರುಡನ ಮೇಲೆ ಹೋದನೆಂದು ಕಥೆ. ಪಾಂಡವರ ರಾಜಸೂಯಯಾಗ ಸಂದರ್ಭದಲ್ಲಿ ಅರ್ಜುನ ಈ ಪಟ್ಟಣವನ್ನು ಮುತ್ತಿದ. ದುರ್ಯೋಧನ ಮಾಡಿದ ವೈಷ್ಣವಯಾಗದ ಸಮಯದಲ್ಲಿ ಕರ್ಣ ಪ್ರಾಗ್ಜ್ಯೋತಿಷಪುರವನ್ನು ಮುತ್ತಿ ಮತ್ತೊಮ್ಮೆ ಭಗದತ್ತನನ್ನು ಜಯಸಿದ. ಭಗದತ್ತನೊಡನೆ ಎಂಟು ದಿನಗಳವರೆಗೆ ಹೋರಾಡಿ ಗೆದ್ದು ಆತನಿಂದ ಕಪ್ಪವನ್ನು ಪಡೆದ.

	ಭಗದತ್ತ ತನ್ನ ಸುಪ್ರತೀಕ ಗಜದೊಂದಿಗೆ ಕೌರವರ ಪರವಾಗಿ ಮಹಾಭಾರತ ಯುದ್ಧದಲ್ಲಿ ಹೋರಾಡಿ ಅರ್ಜುನನಿಂದ ಸತ್ತ.												     (ಡಿ.ಕೆ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ